ಶ್ಯಾಮಾಶಾಸ್ತ್ರೀ
	1762-1827. ಕರ್ಣಾಟಕ ಸಂಗೀತದ ವಾಗ್ಗೇಯಕಾರ ತ್ರಿಮೂರ್ತಿಗಳ ಪೈಕಿ ಹಿರಿಯರು. ಇನ್ನಿಬ್ಬರು ತ್ಯಾಗರಾಜರು ಮತ್ತು ಮುತ್ತುಸ್ವಾಮಿ ದೀಕ್ಷಿತರು (1775-1835). ತಮಿಳುನಾಡಿನ ತಂಜಾವೂರು ಜಿಲ್ಲೆಯ ತುರುವಾರೂರಿನಲ್ಲಿ ಜನನ. ಈ ತ್ರಿಮೂರ್ತಿಗಳು ಸಮಕಾಲೀನರು, ಏಕಸ್ಥಳಜರು ಕೂಡ. ಇವರಿಂದ ಸಂಗೀತ ಲೋಕ ಅದ್ವಿತೀಯ ರಾಗ ವೈಭವಗಳ ಲಕ್ಷ್ಯಲಕ್ಷಣಗಳನ್ನು ಪಡೆದು ಸಮೃದ್ಧವಾದ ಕಾರಣ ಇವರನ್ನು ಕರ್ಣಾಟಕ ಸಂಗೀತಕ್ಷೇತ್ರದ ದಿಗ್ಗಜಗಳೆಂದೂ ಧ್ರುವತಾರೆಗಳೆಂದೂ ಗುರುತಿಸುವುದು ವಾಡಿಕೆ. ಶ್ಯಾಮಾಶಾಸ್ತ್ರಿಗಳ ಪೂರ್ವಜರು ಮೂಲತಃ ಕಾಂಚೀಪುರದವರು. 1565ರಲ್ಲಿ ರಕ್ಕಸತಂಗಡಿ ಕದನದಲ್ಲಿ ವಿಜಯನಗರ ಸಾಮ್ರಾಜ್ಯ ಬುಡಸಮೇತ ನಾಶವಾದಾಗ ಯುದ್ಧದ ಬಿಸಿ ಕಾಂಚೀಪುರಕ್ಕೂ ತಟ್ಟಿದ್ದರಿಂದ  ಅಲ್ಲಿಯ ಅನೇಕ ಜನ ಭಯಭೀತರಾಗಿ ತಂಜಾವೂರಿಗೆ ವಲಸೆಹೋದರು. ಹಾಗೆ ಹೋದವರಲ್ಲಿ ಕಾಂಚಿಪುರವಾಸಿನಿ ಕಾಮಾಕ್ಷಿ ದೇವಾಲಯದಲ್ಲಿ ಬಂಗಾರು ಕಾಮಾಕ್ಷಿ ಎಂಬ ಸುವರ್ಣ ಪುತ್ಥಳಿಯನ್ನು ಪೂಜಿಸುತ್ತಿದ್ದ ಅರ್ಚಕ ವಿಶ್ವನಾಥಶಾಸ್ತ್ರಿಗಳೂ ಒಬ್ಬರು. ಅವರು ತಂಜಾವೂರಿ ನಲ್ಲಿ ರಾಜಾಶ್ರಯ ಪಡೆದರು, ಬಂಗಾರುಕಾಮಾಕ್ಷಿಯನ್ನು ಅಲ್ಲಿಯ ಪಶ್ಚಿಮ ಮುಖ್ಯರಸ್ತೆಯಲ್ಲಿಯ ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಅರ್ಚಕ ಕೈಂಕರ್ಯವನ್ನು ವಹಿಸಿಕೊಂಡರು. ಅವರ ಮಗನೇ ಶ್ಯಾಮಾಶಾಸ್ತ್ರೀ. ವೆಂಕಟಾಚಲಪತಿಯ ಅನುಗ್ರಹದಿಂದ ಜನಿಸಿದವರೆಂದೂ ಕುಮಾರ ಸ್ವಾಮಿಯ ಜನ್ಮನಕ್ಷತ್ರವಾದ ಕೃತ್ತಿಕಾ ನಕ್ಷತ್ರದಲ್ಲಿ ಹುಟ್ಟಿದವರೆಂದೂ ಕಾರಣ ಕಲ್ಪಿಸಿ ಇವರ ಹಿರಿಯರು ಇವರಿಗೆ ವೆಂಕಟಸುಬ್ರಹ್ಮಣ್ಯನೆಂದು ನಾಮಕರಣ ಮಾಡಿದರು. ಮನೆಯ ಮುದ್ದಿನ ಹೆಸರು ಶ್ಯಾಮಕೃಷ್ಣ ಮುಂದೆ ಅದೇ ಇವರ ಕೃತಿಗಳ ನಾಮಾಂಕಿತವಾಯಿತು. 

	ಬಾಲ್ಯದಿಂದಲೂ ಶ್ಯಾಮಾಶಾಸ್ತ್ರೀಗಳಿಗೆ ಸಂಗೀತದಲ್ಲಿ ಒಲವು. ಇವರಿಗೆ ಸಂಗೀತದ ಓನಾಮ ಹಾಕಿಕೊಟ್ಟವರು ಸೋದರಮಾವ. ಅಂದಿನ ಕಾಲಕ್ಕೆ ದೇವಾಲಯದಲ್ಲಿ ಶ್ಯಾಮಾಶಾಸ್ತ್ರೀಯವರು ಹಾಡಿದ ಶ್ಲೋಕವೊಂದು ವಾರಾಣಸಿಯಿಂದ ಸಂಚಾರ ಕೈಗೊಂಡಿದ್ದ ಸಂಗೀತಸ್ವಾಮಿ ಎಂಬ ಆಂಧ್ರದ ವಿದ್ವಾಂಸರ ಕಿವಿಗೆ ಬಿತ್ತು. ಸ್ವರೋಚ್ಚಾರಣೆ ಹಾಗೂ ಹಾಡಿನ ಗತ್ತು ಅವರನ್ನು ಆಕರ್ಷಿಸಿತು. ತಾವೇ ವಿಶ್ವನಾಥಶಾಸ್ತ್ರಿಯವರನ್ನು ಒಪ್ಪಿಸಿ ತಂಜಾವೂರಿನಲ್ಲಿದ್ದಷ್ಟು ಕಾಲವೂ ಶ್ಯಾಮಾಶಾಸ್ತ್ರಿಗಳಿಗೆ ರಾಗ, ತಾಳ, ಸ್ವರಪ್ರಸ್ತಾರಗಳ ಭೇದಗಳನ್ನು ಬೋಧಿಸಿದ್ದಲ್ಲದೆ ತಾವು ತೆರಳುವ ಮುನ್ನ ಅಂದಿನ ತಂಜಾವೂರು ಆಸ್ಥಾನವಿದ್ವಾಂಸರಾಗಿದ್ದ ಸಚ್ಚಿಮಿರಿಯಮ್ ಆದಿಯಪ್ಪೈಯ್ಯನವರಲ್ಲಿ ಸಂಗೀತ ಮುಂದುವರಿಸುವ ಏರ್ಪಾಡನ್ನೂ ಮಾಡಿದರು. 

	ತಂದೆಯ ನಿಧನಾನಂತರ ಬಂಗಾರುಕಾಮಾಕ್ಷಿಯಮ್ಮನ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಂಡ ಶ್ಯಾಮಾಶಾಸ್ತ್ರೀಗಳ ಜೊತೆಗೆ ಶ್ರೀವಿದ್ಯಾ ಉಪಾಸನೆಯನ್ನೂ ಜ್ಯೋತಿಷ್ಯಶಾಸ್ತ್ರವನ್ನೂ ಕಲಿತರು. ಆದಿಯಪ್ಪೈನವರು ಆ ಕಾಲಕ್ಕೆ ಮನಾರ್‍ಗುಡಿ ಶ್ರೀ ರಾಜಗೋಪಾಲಸ್ವಾಮಿಯ ಮೇಲೆ ಲೋಕೋತ್ತರವಾದ ಭೈರವಿ ರಾಗದಲ್ಲಿ ವೀರಿಬೋಣಿ ಅಟ್ಟತಾಳ ವರ್ಣವನ್ನು ರಚಿಸಿ ಪ್ರಸಿದ್ಧರಾಗಿದ್ದಂಥವರು. ಶ್ಯಾಮಾಶಾಸ್ತ್ರೀಯವರ ವಿದ್ವತ್ತು, ಸ್ವರಖಚಿತತೆ ಹಾಗೂ ಭವ್ಯಕಂಠಶ್ರೀಗಳಿಗೆ ಮರುಳಾಗಿ ಶಿಷ್ಯನಿಗೇ ಎಷ್ಟೋ ವೇಳೆ ತಲೆಬಾಗಿದ್ದುದುಂಟೆಂದು ಕೆಲವು ಸಂದರ್ಭಗಳಲ್ಲಿ ದಾಖಲಾಗಿದೆ. ಶ್ಯಾಮಾಶಾಸ್ತ್ರೀಯವರನ್ನು ಕಂಡರೆ ಗುರುಗಳಿಗೆ ಕಾಮಾಕ್ಷಿಯಮ್ಮನ ಅವತಾರ ವೆಂದೇ ಭಾಸವಾಗಿ ಕಾಮಾಕ್ಷಿ ಎಂದೇ ಎಷ್ಟೋಸಲ ಕರೆಯುತ್ತಿದ್ದರಂತೆ.

	ಕರ್ಣಾಟಕ ಸಂಗೀತ ಕ್ಷೇತ್ರಕ್ಕೆ ಶ್ಯಾಮಾಶಾಸ್ತ್ರೀಯವರ ಕೊಡುಗೆ ಅಪಾರ. ಇವರ ಎಲ್ಲ ಕೃತಿಗಳೂ ಇವರ ಅಪಾರ ಕಲಾಭಿಜ್ಞತೆ, ರಸಾನುಭವ ಪಕ್ವತೆ ಮತ್ತು ಸ್ವರಖಚಿತತೆಗಳಿಗೆ ಸಾಕ್ಷಿಯಾಗಿವೆ. ಇವರ ಕೃತಿಗಳ ಸ್ವರವರ್ಣ ಸಂಯೋಗ ಸಾಹಿತ್ಯದ ಕದಳೀಪಾಕ ಶೈಲಿಗೆ ಪ್ರತೀಕವಾಗಿದೆ. ತಾಯಿಗಾಗಿ ಹಂಬಲಿಸುವ ಕಂದನ ವಾತ್ಸಲ್ಯ ಹಾಗೂ ಆರ್ತಭಾವಗಳನ್ನು ಇವರ ಕೃತಿಗಳು ಪೋಷಿಸುತ್ತವೆನ್ನಲಾಗಿದೆ. ಆನಂದ ಭೈರವಿ ಇವರ ಮೆಚ್ಚಿನ ರಾಗ. ಇದರಲ್ಲೇ ಇವರ ಹೆಚ್ಚಿನ ಕೃತಿಗಳು ರಚಿತವಾಗಿವೆ. ಬಂಗಾರುಕಾಮಾಕ್ಷಿ ಅವರಿಗೆ ಆನಂದಭೈರವಿಯಾಗಿಯೇ ಗೋಚರಿಸಿರಬಹುದೆನ್ನುವಷ್ಟರ ಮಟ್ಟಿಗೆ ಆ ರಾಗದ ಬಂಗಾರುಕಾಮಾಕ್ಷಿ ಎಂಬ ತಮಿಳು ಕೃತಿ, ಮರಿವೇರೆಗತಿ, ಓ ಜಗದಂಬಾ, ಪಾಹಿ ಶ್ರೀ ಗಿರಿರಾಜಸುತೆ, ಹಿಮಾಚಲತನಯೆ ಕೃತಿಗಳು ರಚಿತವಾಗಿವೆ. ಇವಲ್ಲದೆ, ಭೈರವಿ ರಾಗದ ಸರಿಕಾವರಮ್ಮ, ಫರಜ್‍ರಾಗದ ನೀಲಾಯತಾಕ್ಷಿ ಮತ್ತು ತ್ರಿಲೋಕಮಾತ, ಶಂಕರಾಭರಣದ ಸರೋಜದಳ ನೇತ್ರಿ, ಸಾವೇರಿಯ ದುರುಸುಗ, ಶಂಕರಿ ಶಂ ಕುರು, ಪುನ್ನಾಗವರಾಳಿಯ ಕನಕ ಶೈಲ ವಿಹಾರಿಣಿ, ಕಲ್ಯಾಣಿಯ ಬಿರಾನವರಾಲಿಚ್ಚಿ, ಸಂಸ್ಕøತದ ಹಿಮಾದ್ರಿಸುತೆ, ತಲ್ಲಿನಿನ್ನು, ಇವು ಅತಿ ಹೆಚ್ಚು ಪ್ರಚಾರದಲ್ಲಿರುವ ಕೃತಿಗಳು. ಮಾಂಜಿರಾಗದ ಬ್ರೋವವಮ್ಮ, ಚಿಂತಾಮಣಿರಾಗದ ದೇವಿ ಬ್ರೋವ ಸಮಯಮಿದೆ ಮತ್ತು ಕಲಗಡರಾಗದ ಪಾರ್ವತಿನಿಮ್ಮ ಈ ಮೂರು ಅಪೂರ್ವ ರಾಗ ಕೃತಿಗಳಲ್ಲಿ ಭಕ್ತಿರಸವೂ ರಾಗಭಾವವೂ ಸಮೀಕರಿಸಿರುವ ರೀತಿ ಶ್ಯಾಮಾಶಾಸ್ತ್ರೀಗಳ ಅಗಾಧ ಪ್ರತಿಭೆಗೆ ಸಾಕ್ಷಿ. 

	ಶ್ಯಾಮಾಶಾಸ್ತ್ರೀಗಳು ತಮಿಳು ಭಾಷಿಗರಾಗಿದ್ದರೂ ಇವರ ಬಹುತೇಕ ಕೃತಿಗಳು ರಚಿತವಾಗಿರುವುದು ತೆಲುಗಿನಲ್ಲೇ. ಇವರ ಎಲ್ಲ ಕೃತಿಗಳೂ ವಿಶೇಷವಾಗಿ ತಾಳ ಹಾಗೂ ಲಯಕ್ಕೆ ಪ್ರಸಿದ್ಧವಾದವು. ಛಾಪುತಾಳ ವಿಶೇಷ ಆಯ್ಕೆ. ತಕಿಟ+ತಕಧಿಮ (3+4) ಕ್ರಮದ ಛಾಪು ಇವರ ಅಕ್ಕರೆಯ ಲಯ. ಆದರೂ ತಕಧಿಮಿ+ತಕಿಟ (4+3) ಎಂಬ ವಿಲೋಮ ಛಾಪು ಕ್ರಮದಲ್ಲಿ ಮೊತ್ತಮೊದಲ ಕೃತಿಯನ್ನು ರಚಿಸಿದವರು ಶ್ಯಾಮಾ ಶಾಸ್ತ್ರೀಗಳೇ. ಪೂರ್ವಿಕಲ್ಯಾಣಿ ರಾಗದ ನಿನ್ನುವಿನಾ ಮತ್ತು ಕಲ್ಯಾಣಿಯ ತಲ್ಲಿನಿನ್ನು ಕೃತಿಗಳು ವಿಲೋಮಛಾಪುವಿಗೆ ಸಾಕ್ಷಿ. ಹೀಗೆ ಛಾಪುತಾಳದಲ್ಲಿ ನಿಸ್ಸೀಮರಾದ ಶ್ಯಾಮಾಶಾಸ್ತ್ರೀಗಳ ಮುಕ್ಕಾಲುಭಾಗದ ಕೃತಿಗಳು ರಚಿತವಾಗಿರುವುದು ಅಸೀಮ ಗಾಂಭೀರ್ಯ ಛಾಪುವಿನಲ್ಲೇ. 

	ಭೈರವಿರಾಗದ ಕಾಮಾಕ್ಷಿ ಅನುದಿನಮು, ತೋಡಿರಾಗದ ರಾವೆ ಹಿಮಗಿರಿ ತನಯೆ ಮತ್ತು ಯದುಕುಲಕಾಂಭೋಜಿಯ ಕಾಮಾಕ್ಷಿ ನೀ ಪದಯುಗಮೇ ಸ್ಥಿರಮನಿ ಈ ಮೂರೂ ಸ್ವರಜತಿಗಳ ವಿದ್ವತ್ತಿಗೆ ಸಾಟಿಯಾದ ಬೇರೆ ಸ್ವರಜತಿಗಳೇ ಇಲ್ಲ ಎಂಬ ಮಾತಿದೆ. ಭೈರವಿರಾಗದ ಸ್ವರಜತಿ ಕಾಮಾಕ್ಷಿಯ ಎಂಟು ಚರಣಗಳ ಪ್ರಾರಂಭ ಸ್ವರಗಳು ಕ್ರಮವಾಗಿ ಸ, ರಿ, ಗ, ಮ, ಪ, ದ, ನಿ ಎಂಬ ಸಪ್ತಸ್ವರಗಳ ಆರೋಹಣ ಕ್ರಮದಲ್ಲಿರುವುದು ವಿಶೇಷ. 

	ಇವರ ಕೃತಿಗಳ ಮತ್ತೊಂದು ವಿಶೇಷವೆಂದರೆ, ಹೆಚ್ಚಿನವು ಮೂರು ಚರಣಗಳ ರಚನೆಗಳೇ. ಕೆಲವಲ್ಲಿ ನಾಲ್ಕು ಅಥವಾ ಐದು ಚರಣಗಳಿರು ವುದೂ ಉಂಟು. ಸಾಮಾನ್ಯವಾಗಿ ಕೃತಿಗಳಲ್ಲಿ ಕಂಡುಬರುವ ಪಲ್ಲವಿ, ಅನುಪಲ್ಲವಿ, ಚರಣಗಳೆಂಬ ಅಂಗಗಳಲ್ಲದೆ ಸ್ವರಸಾಹಿತ್ಯವೆಂಬ ಮತ್ತೊಂದು ಉಪಂಶ ಇವರ ಹೆಚ್ಚಿನ ಕೃತಿಗಳಲ್ಲಿವೆ. ಅನೇಕ ಕೃತಿಗಳಲ್ಲಿ ಸೂಚಿತ, ಶುದ್ಧ ಮತ್ತು ಮಿಶ್ರಸ್ವರಾಕ್ಷರಗಳು ಜತಿಗಳಿಲ್ಲದ ವಿಶೇಷ ರಚನೆಗಳಾಗಿವೆ. ಇವು ರಾಗಭಾವ ಹಾಗೂ ಲಯವಿನ್ಯಾಸಕ್ಕೆ ಪ್ರಸಿದ್ಧ. 

	ಶ್ಯಾಮಾಶಾಸ್ತ್ರೀಗಳು 64 ವರ್ಷಗಳ ತುಂಬು ಬಾಳು ನಡೆಸಿದವರು. 1827ನೆಯ ಸಂವತ್ಸರ ಮಕರಮಾಸದ ಶುಕ್ಲದಶಮಿಯ ದಿನಕ್ಕೆ ತಮ್ಮ ಪತ್ನಿ ಕಾಲವಾದ ಆರನೆಯ ದಿನಕ್ಕೆ, ದೇವಿಯ ಧ್ಯಾನಮಾಡುತ್ತ ದೈವಲೀನರಾದರು. ಇವರ ಇಬ್ಬರು ಪುತ್ರರಾದ ಸಂಜುಶಾಸ್ತ್ರಿ ಮತ್ತು ಸುಬ್ಬರಾಯಶಾಸ್ತ್ರಿಗಳು ತ್ಯಾಗರಾಜರ ಶಿಷ್ಯರಾಗಿದ್ದು ಪ್ರಖ್ಯಾತ ಪಿಟೀಲುವಾದಕರೂ ಗಾಯಕರೂ ಆಗಿದ್ದರು. ಇವರ ವಂಶಸ್ಥರು ಇಂದಿಗೂ ತಂಜಾವೂರಿನಲ್ಲಿದ್ದಾರೆ. ಶ್ಯಾಮಾಶಾಸ್ತ್ರೀಗಳ ಶಿಷ್ಯವರ್ಗದಲ್ಲಿ ಪ್ರಮುಖರು ಸಂಗೀತಸ್ವಾಮಿ, ಅಲಸೂರು ಕೃಷ್ಣಯ್ಯರ್, ಪೆರಂಬೂರು ಕೃಷ್ಣಯ್ಯರ್ ತಳಗಂಬಾಡಿ ಪಂಚನದ ಅಯ್ಯರ್ (ಬಿರಾನ ಬ್ರೋವ ಇದಿ-ಕಲ್ಯಾಣಿ-ತ್ರಕ್ರಲಮ-ಕೃತಿಯ ವಾಗ್ಗೇಯಕಾರರು), ದಾಸರಿ ಮುಂತಾದವರು.	
						
	(ಜಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ